ನನ್ನಯ
ಕವಿತ್ರಯರೆಂದು ಪ್ರಸಿದ್ಧರಾಗಿರುವ ತೆಲುಗು ಭಾರತ ಕವಿಗಳಲ್ಲಿ ಮೊದಲನೆಯವ. ಕ್ರಿ.ಶ. 1022 ರಿಂದ 1063 ರವರೆಗೆ ವೆಂಗಿಯ ಅರಸನಾಗಿದ್ದ ರಾಜರಾಜ ನರೇಂದ್ರನ ಆಸ್ಥಾನ ಕವಿ ಹಾಗೂ ಕುಲಪುರೋಹಿತ. ರಾಜರಾಜ ಚಂದ್ರ ವಂಶದವ. ಚಂದ್ರ ಪೂರು ಭರತೇಶ ಕುರುಪ್ರಭು ಪಾಂಡು ಭೂಪತಿಗಳು ತನ್ನ ವಂಶದವರೇ ಎಂಬ ಅಭಿಮಾನವಿದ್ದಿರಬೇಕು ಆ ಚಾಳುಕ್ಯ ಭೂಪನಿಗೆ; ಆದ್ದರಿಂದ ಆತ ಅವಿರಳಜಪಹೋಮತತ್ಪರನೂ ಸಂಹಿತಾಭ್ಯಾಸಿ ಬ್ರಹ್ಮಾಂಡಾದಿ ನಾನಾ ಪುರಾಣವಿಜ್ಞಾನನಿರತನೂ ಉಭಯಭಾಷಾ ಕಾವ್ಯರಚನಾಶೋಭಿತನೂ ಸಪ್ರತಿಭಾತಿ ಯೋಗ್ಯನೂ ನಿತ್ಯಸತ್ಯವಚನನೂ ಆದ ಈ ಕವಿಯನ್ನು ತನ್ನ ವಂಶದಲ್ಲಿ ಪ್ರಸಿದ್ಧರಾದ ಪಾಂಡವೋತ್ತಮರ ಚರಿತ್ರೆಯನ್ನು ತೆಲುಗಿನಲ್ಲಿ ಹೇಳಬೇಕೆಂದು ಕೇಳಿಕೊಂಡ. ವಿದ್ವಜ್ಜನರೂ ಈ ಮಹಾಕಾರ್ಯವನ್ನು ಕೈಗೊಳ್ಳುವಂತೆ ಈತನನ್ನು ಪ್ರೋತ್ಸಾಹಿಸಿದರು. ದುರ್ಗಮಾರ್ಥಜಲಗೌರವ ಭಾರತ ಭಾರತೀ ಸಮುದ್ರವನ್ನು ಈಜಿ ದಾಟುವುದು ಯಾರಿಗೂ ಸಾಧ್ಯವಾಗದೆಂಬುದನ್ನು ಬಲ್ಲ ಈ ಕವಿ ರಾಜನ ಪ್ರಾರ್ಥನೆಯನ್ನು ನಿರಾಕರಿಸಲೊಲ್ಲದೆ ಒಪ್ಪಿಕೊಂಡು ಮಹಾಕಾರ್ಯವನ್ನು ಆರಂಭಿಸಿದ.

  	ಭಾರತವನ್ನು ಸಂಪೂರ್ಣವಾಗಿ ತೆಲುಗಿಸುವುದು ನನ್ನಯನ ಅದೃಷ್ಟದಲ್ಲಿರಲಿಲ್ಲ. ಆದಿ, ಸಭಾ ಪರ್ವಗಳನ್ನು ರಚಿಸಿ ಅರಣ್ಯಪರ್ವದ ಮಧ್ಯದಲ್ಲಿರುವಾಗಲೇ ಕವಿ ತೀರಿಕೊಂಡ. ಉಳಿದ ಭಾಗವನ್ನು ಆಮೇಲಿನ ಕವಿಗಳಾದ ತಿಕ್ಕನ ಸೋಮಯಾಜಿ ಮತ್ತು ಎ¾ùನರು ಬರೆದು ಪೂರ್ಣಗೊಳಿಸಿದರು.

  	ಭಾರತ ರಚನೆಯ ಮಹಾಕಾರ್ಯದಲ್ಲಿ ನನ್ನಯನಿಗೆ ಸಹಾಧ್ಯಾಯಿಯೂ ಸ್ನೇಹಿತನೂ ಆದ ನಾರಾಯಣಭಟ್ಟನೆಂಬ ಬ್ರಾಹ್ಮಣ ವಿಶೇಷವಾಗಿ ಸಹಾಯ ಮಾಡಿದ. ಆತ ಸಂಸ್ಕøತ, ಪ್ರಾಕೃತ, ಆಂಧ್ರ ಮತ್ತು ಕನ್ನಡ ಭಾಷೆಗಳಲ್ಲಿ ಶ್ರೇಷ್ಠ ಪಂಡಿತನಾಗಿದ್ದು ಕವಿತ್ವವನ್ನೂ ಮಾಡಬಲ್ಲವನಾಗಿದ್ದನಂತೆ. ಆತನ ಕೃತಿಗಳು ಸಿಕ್ಕಿಲ್ಲ. ಭಾರತ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಸಹಾಯ ಮಾಡಿದಂತೆ ನಾರಾಯಣ ಭಟ್ಟ ಕಾವ್ಯರಚನೆಯಲ್ಲಿ ತನಗೆ ಸಹಾಯ ಮಾಡಿದನೆಂದು ನನ್ನಯನೇ ಹೇಳಿಕೊಂಡಿದ್ದಾನೆ. ಈ ಸಹಾಯವನ್ನು ಮೆಚ್ಚಿಕೊಂಡು ರಾಜರಾಜ ನಾರಾಯಣ ಭಟ್ಟನಿಗೆ ನಂದಮಪೂಡಿಯೆಂಬ ಗ್ರಾಮವನ್ನು ಅಗ್ರಹಾರವಾಗಿ ಕೊಟ್ಟ. ಆ ದಾನಶಾಸನವನ್ನು ನನ್ನಯನೇ ರಚಿಸಿದ್ದಾನೆ. ಭಾರತ ಬರೆದವನಿಗಿಂತ ಮುಂಚೆ ಆತನಿಗೆ ನೆರವು ನೀಡಿದವನಿಗೇ ಮನ್ನಣೆಯಾಗಿರುವುದನ್ನು ಗಮನಿಸಿದರೆ ಆತ ನೀಡಿದ ನೆರವು ಮಹತ್ತ್ವಪೂರ್ಣವಾದುದೇ ಆಗಿರಬೇಕು.

  	ನನ್ನಯ ಭಾರತ ಕೇವಲ ಇತಿಹಾಸ ಮಾತ್ರವಲ್ಲ ಅದು ವೇದಸಾರ ಎಂದೇ ನಂಬಿದವ. ಅದರಲ್ಲಿ ಆಧ್ಯಾತ್ಮ, ನೀತಿ, ಕಾವ್ಯ, ಪುರಾಣ ಎಲ್ಲವೂ ಅಡಕವಾಗಿದೆಯೆಂದೇ ಈತನ ಹೇಳಿಕೆ. ಭಾರತ ಶ್ರವಣಪಠಣಗಳಿಂದ ಅಶೇಷ ಪಾಪಕ್ಷಯವಾಗುವುದೆಂದು ಈತನ ನಂಬಿಕೆ. ಇಂಥ ಪುಣ್ಯಪ್ರದವಾದ ಗ್ರಂಥರತ್ನವನ್ನು ತೆಲುಗಿನಲ್ಲಿ ಸರ್ವಜನರಿಗೂ ತಿಳಿಯುವಂತೆ ಹೇಳುವುದೇ ಈತನ ಧ್ಯೇಯ. ಇದು ಮೂಲಗ್ರಂಥದ ಕ್ರಮವಾದ ಅನುವಾದವಲ್ಲ. ಲಕ್ಷ ಶ್ಲೋಕಗಳನ್ನೊಳಗೊಂಡ ಆ ಮಹಾ ಗ್ರಂಥವನ್ನು ಈತ ಸಂಗ್ರಹಿಸಿದ್ದಾನೆ. ಹಾಗೆ ಸಂಕ್ಷೇಪ ಮಾಡುವಾಗ ಮೂಲಗ್ರಂಥದ ಉದ್ದೇಶಕ್ಕೆ ಸ್ವಲ್ಪವೂ ಕುಂದುಂಟಾಗದಂತೆ ಎಚ್ಚರಿಕೆಯಿಂದ ಅನುವಾದಿಸಿದ್ದಾನೆ. ಎಲ್ಲೂ ಮೂಲ ಕಥಾಭಿತ್ತಿಯಲ್ಲಿ ವ್ಯತ್ಯಾಸ ಮಾಡುವ ಸ್ವಾತಂತ್ರ್ಯ ವಹಿಸಿಲ್ಲ. ಮೂಲದಲ್ಲಿ ಚರ್ವಿತಚರ್ವಣಗಳಾಗಿ ಬಂದಿರುವ ಅನೇಕ ಧರ್ಮೋಪದೇಶದ ಪ್ರಕರಣಗಳು, ದೀರ್ಘವರ್ಣನೆಗಳು ಮೊದಲಾದುವನ್ನು ತಗ್ಗಿಸಿ ಭಾರತಕ್ಕೆ ವಿಶೇಷವಾದ ಮೆರುಗು ತಂದಿದ್ದಾನೆ.

  	ಈತ ಕೊಟ್ಟಿರುವ ಪರ್ವಾನುಕ್ರಮಣಿಕೆ ಪಂಪಭಾರತದ ಕೊನೆಯಲ್ಲಿ ಬಂದಿರುವ ಉಪಾಖ್ಯಾನಗಳ ಪಟ್ಟಿಯನ್ನು ಬಹಳವಾಗಿ ಹೋಲುತ್ತದೆ. ಉಭಯಕವಿಗಳೂ ಅಂದು ವೆಂಗಿ ದೇಶದಲ್ಲಿ ಪ್ರಚಾರದಲ್ಲಿದ್ದ ಸಂಸ್ಕøತ ಭಾರತದ ಪಾಠವನ್ನೇ ಅವಲಂಬಿಸಿ ಅದರಲ್ಲಿದ್ದ ಪರ್ವಾನುಕ್ರಮಣಿಕೆಯನ್ನೇ ಅನುಸರಿಸಿರುವಂತೆ ತೋರುತ್ತದೆ. ನನ್ನಯ ಅದನ್ನು ಯಥಾತಥವಾಗಿ ಅನುವಾದ ಮಾಡಿದ್ದರೆ ಪಂಪ ತನ್ನ ಕಾವ್ಯೋದ್ದೇಶಕ್ಕೆ ತಕ್ಕಂತೆ ಕೆಲವು ಹೆಸರುಗಳನ್ನು ಕೈಬಿಟ್ಟು ಬೇರೆ ಕೆಲವನ್ನು ಸೇರಿಸಿಕೊಂಡು ವ್ಯತ್ಯಾಸಮಾಡಿದ್ದಾನೆ. ಆದರೂ ಎರಡೂ ಪಟ್ಟಿಗಳಲ್ಲಿರುವ ಶಬ್ದ ಸಾದೃಶ್ಯ ಗಮನಾರ್ಹವಾಗಿದೆ. ತೆಲುಗು ವಿಭಕ್ತಿ ಪ್ರತ್ಯಯಗಳನ್ನು ತೆಗೆದರೆ ಅವು ಪಂಪನ ಮಾತುಗಳೇ ಆಗಿವೆ. ನಾರಾಯಣಭಟ್ಟ ಪಂಪಭಾರತವನ್ನು ನನ್ನಯನಿಗೆ ಪರಿಚಯ ಮಾಡಿಸಿರಬಹುದೆಂದು ಊಹಿಸಲು ಕಾರಣವಿದೆ.

  	ಪ್ರಸನ್ನಕಥಾಕಲಿತಾರ್ಥಯುಕ್ತಿ, ಅಕ್ಷರ ರಮ್ಯತೆ, ನಾನಾ ರುಚಿರಾರ್ಥ ಪಂಕ್ತಿ-ಇವು ತನ್ನ ಕವಿತೆಯ ಮುಖ್ಯ ಲಕ್ಷಣಗಳೆಂದು ಕವಿ ಹೇಳಿಕೊಂಡಿದ್ದಾನೆ. ಇದರಲ್ಲಿ ಅತಿಶಯೋಕ್ತಿಯಿಲ್ಲ. ಅನುವಾದ ಕಾವ್ಯವಾದರೂ ನನ್ನಯನ ಕವಿತೆ ಸ್ವಕಪೋಲಕಲ್ಪಿತವಾದ ಸ್ವತಂತ್ರ ಕೃತಿಯಂತೆ ಏಕಧಾರೆಯಾಗಿ ನಿರರ್ಗಳವಾಗಿ ಪ್ರವಹಿಸುತ್ತದೆ. ಸಂಸ್ಕøತ ತೆಲುಗುಗಳ ಒಂದು ಸೂಕ್ತ ಸಮ್ಮಿಶ್ರಣ ಶೈಲಿಯನ್ನು ಏರ್ಪಡಿಸಿಕೊಂಡು ಗದ್ಯಪದ್ಯಾತ್ಮಕವಾದ ಚಂಪೂಶೈಲಿಯಲ್ಲಿ ಕೃತಿರಚನೆ ಮಾಡಿ ಆಮೇಲಿನ ತೆಲುಗು ಕವಿಗಳಿಗೆಲ್ಲ ಮಾರ್ಗದರ್ಶಕನಾದ ಈ ಕವಿ ಸಕಲಸುಕವಿಜನವಿನುನಾಗಿದ್ದಾನೆ.						(ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ